ದಿವಾಕರ
ಖಗೋಳಶಾಸ್ತ್ರಜ್ಞ.  ಗೋಳಗ್ರಾಮದ ನಿವಾಸಿ,  ತಂದೆ ನರಸಿಂಹ.  ಸಾಹಿತ್ಯ ಮತ್ತು ವ್ಯಾಕರಣ ಶಾಸ್ತ್ರಗಳ ವಿದ್ವಾಂಸ.  ಜ್ಯೋತಿಷ-ಫಲಭಾಗಕ್ಕೆ ಸೇರಿದ ಗ್ರಂಥಗಳನ್ನೂ ರಚಿಸಿದ್ದಾನೆ. ಈತ ರಚಿಸಿರುವ ಗಣಿತ ತತ್ತ್ವಚಿಂತಾಮಣಿ (ತತ್ತ್ವಚಿಂತಾಮಣಿ, ಗಣಿತ ತತ್ತ್ವ).  ಗಣಿತಾಮೃತಸಾರಿಣಿ, ಪದ್ಧತಿಭೂಷಣ, ಮಕರಂದ ವಿವರಣ ಮತ್ತು ಉದಾಹರಣ, ವರ್ಷಗಣಿತಪದ್ಧತಿ ಟೀಕಾ- ರಥೋದ್ಧತಾ, ಗಣಿತಪದ್ಧತಿ ಟೀಕಾ ಮಂಜುಭಾಷಿಣೀ (ದಿವಾಕರೀಟೀಕಾ) - ಇವು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದವು.  ಗೋಪಾಲಪದ್ಧತಿ, ಗೋಪಿರಾಜ ಮತಖಂಡನ, ಜಾತಕಪದ್ಧತಿ, ಪ್ರಕಾಶ, ಪದ್ಮಜಾತಕ, ಕೇಶವಪದ್ಧತಿ ವ್ಯಾಖ್ಯಾ-ಪ್ರೌಢ ಮನೋರಮಾ, ರಾಜವಿನೋದ ಪ್ರಕಾಶ ಪದ್ಧತಿ, ವರ್ಷತಂತ್ರ, ವರ್ಷಫಲಪದ್ಧತಿ ಮತ್ತು ಶ್ರೀಪತಿ ಪ್ರಕಾಶ - ಇವು ಜ್ಯೋತಿಷ ಫಲಭಾಗಕ್ಕೆ ಸಂಬಂಧಿಸಿದವು.  

ಗಣಿತಾಮೃತಸಾರಿಣಿಯಲ್ಲಿ ಅಬ್ಬಯ್ಯಕವಿ ರಚಿತ ಗಣಿತಾಮೃತದಲ್ಲಿನ ಗ್ರಹಗಳ ಸ್ಥಾನ ಮತ್ತು ಚಲನೆಗಳನ್ನು ವಿವರಿಸುವ ಉದಾಹರಣೆಗಳನ್ನೂ ಪದ್ಧತಿ ಭೂಷಣದಲ್ಲಿ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ವಾರ್ಷಿಕ ಲೆಕ್ಕಾಚಾರಗಳನ್ನೂ ಮಕರಂದ ವಿವರಣಗಳಲ್ಲಿ ಸೂರ್ಯಸಿದ್ಧಾಂತದ ಪ್ರಕಾರ ಮತಾಚರಣೆಯ ಸಂಬಂಧವಾದ ಕರ್ಮಗಳನ್ನು ಮಾಡಲು ಕಾಲವನ್ನು ನಿಗದಿಮಾಡುವ ತಿಥ್ಯಾದಿಪತ್ರ (ಮಕರಂದ ವಿರಚಿತ) ಗ್ರಂಥದ ಉದಾಹರಣೆಗಳನ್ನೊಳಗೊಂಡ ವಿವರಣೆಗಳೂ ಇವೆ.
(ಕೆ.ವಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ